ಪರಾಗ್	-
ಕೇವಲ ಮಕ್ಕಳಿಗೆ ಮೀಸಲಾದ ಹಿಂದಿ ಮಾಸಪತ್ರಿಕೆ. ಬೆನೆಟ್ ಕೋಲ್‍ಮನ್ ಅಂಡ್ ಕಂಪನಿಯವರ ಒಡೆತನದಲ್ಲಿರುವ ಟೈಮ್ಸ್ ಆಫ್ ಇಂಡಿಯ ಪತ್ರಿಕಾ ಗುಂಪಿಗೆ ಸೇರಿದ ಪತ್ರಿಕೆಗಳ ಪೈಕಿ ಒಂದು. ದೆಹಲಿಯಿಂದ ಪ್ರಕಟವಾಗುತ್ತಿದೆ. 1958ರ ಮಾರ್ಚ್ ತಿಂಗಳಲ್ಲಿ ಈ ಪತ್ರಿಕೆ ಪ್ರಾರಂಭವಾಯಿತು. ಸ್ವಲ್ಪ ದಿನಗಳಲ್ಲಿ ಇದು ಅಪಾರವಾದ ಜನಪ್ರಿಯತೆಯನ್ನು ಗಳಿಸಿದ್ದರಿಂದ ಪತ್ರಿಕೆಯ ಪ್ರಸಾರ ನಿರಂತರವಾಗಿ ಬೆಳೆಯುತ್ತಲೇ ಹೋಯಿತು. ಈಗ ಪರಾಗದ ಪ್ರಸಾರ ಸುಮಾರು 1,40,000. ಪತ್ರಿಕೆಯ ಪ್ರಥಮ ಸಂಪಾದಕರು ಆನಂದ್ ಪ್ರಕಾಶ್ ಜೈನ್, ಈಗ ಕೆ.ಎಲ್. ನಂದನ್ ಸಂಪಾದಕರಾಗಿದ್ದಾರೆ. ತ್ರಿವರ್ಣಗಳಲ್ಲಿ ಸುಂದರವಾಗಿ ಮುದ್ರಿತವಾಗುವ ಈ ಪತ್ರಿಕೆಯಲ್ಲಿ ಮಕ್ಕಳನ್ನು ರಂಜಿಸುವ ಕಥೆಗಳು. ಒಂದು ಧಾರಾವಾಹಿ ಕಾದಂಬರಿ, ನಗೆಬುಗ್ಗೆ, ಚಕ್ರಬಂಧ ಸ್ಪರ್ಧೆ. ಪುಸ್ತಕ ವಿಭಾಗದಲ್ಲಿ ಒಂದು ಚಿಕ್ಕಗಾತ್ರದ ಕಾದಂಬರಿ ಮುಂತಾದವು ಇರುತ್ತವೆ. ಸಾಮಾನ್ಯವಾಗಿ 84 ಪುಟಗಳನ್ನೊಳಗೊಂಡಿರುವ ಪರಾಗದ ಬಿಡಿ ಪ್ರತಿಯ ಬೆಲೆ ರೂ. 1.25. 									   (ಎಸ್.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ